ಪರಮಾರ್ಥಸತ್ಯ -
ಮಾಧ್ಯಮಿಕ ದರ್ಶನದಲ್ಲಿ ಶೂನ್ಯತೆ ಪರಮಾರ್ಥ ಸತ್ಯವೆಂಬ ಪ್ರಮೇಯವಿದೆ; ಸಂಸಾರವೆಂಬ ಸಂವೃತಿ ಸತ್ಯದಿಂದ ವಿಲಕ್ಷಣವಾದದ್ದು ಇದು. ಎಲ್ಲ ದೃಷ್ಟಿ (ದರ್ಶನ)ಗಳನ್ನೂ ನಿಃಸರಣಮಾಡಲು ಬುದ್ಧ ಶೂನ್ಯತೆಯೆಂಬುದನ್ನು ಹೇಳಿದ ; ಆದರೆ ಇದೇ ಒಂದು ದೃಷ್ಟಿಯಾಗಬಾರದೆಂದು ನಾಗಾರ್ಜುನನ ವಾದ. ಈ ವಾದವನ್ನು ಸಮರ್ಥಿಸಲು ತತ್ತ್ವವನ್ನು ನಾಲ್ಕು ನೆಲೆಗಳಲ್ಲಿ ಹೇಳುತ್ತಾರೆ. ಮೊದಲನೆಯ ನೆಲೆಯಲ್ಲಿ ಸಂಸಾರ ಸಂವೃತ್ತಿ ಸತ್ಯ, ಶೂನ್ಯತೆ ಪರಮಾರ್ಥಸತ್ಯ; ಎರಡನೆಯ ನೆಲೆಯಲ್ಲಿ ಮೊದಲನೆಯ ನೆಲೆಯೇ ಸಂವೃತ್ತಿ ಸತ್ಯ, ಸಂಸಾರವೂ ಅಲ್ಲದೆ ಶೂನ್ಯತೆಯೂ ಅಲ್ಲದುದು ಪರಮಾರ್ಥಸತ್ಯ ; ಮೂರನೆಯ ನೆಲೆಯಲ್ಲಿ ಎರಡನೆಯ ನೆಲೆಯೇ ಸಂವೃತಿ ಸತ್ಯ, ಸಂಸಾರ-ಶೂನ್ಯತೆಗಳಲ್ಲದುದಕ್ಕೆ ವಿಲಕ್ಷಣವಾಗಿರುವುದು ಪರಮಾರ್ಥ ಸತ್ಯ ; ನಾಲ್ಕನೆಯ ನೆಲೆಯಲ್ಲಿ ಮೂರನೆಯ ನೆಲೆಯೇ ಸಂವೃತಿಸತ್ಯ ; ಮೂರನೆಯ ನೆಲೆಯೇ ಪರಮಾರ್ಥಸತ್ಯಕ್ಕೆ ವಿಲಕ್ಷಣವಾದುದು ಇಲ್ಲಿ ಪರಮಾರ್ಥ ಸತ್ಯ. ಈ ನೇತಿ ನೇತಿಮಾರ್ಗದಿಂದಲೇ ನಿರ್ವಾಣದ ತಾತ್ಪರ್ಯ ಮನದಟ್ಟಾಗುವುದು ಸಾಧ್ಯ.

	ನಾಗರ್ಜುನನ ಸಿದ್ಧಾಂತದಲ್ಲಿ ಹೀಗೆ ಪರಮಾರ್ಥಸತ್ಯವನ್ನು ಸದಸದಾದಿ ಚತುಷ್ಕೋಟಿ ಶೂನ್ಯವೆಂದು ಹೇಳಿ ಅದು ನಿರ್ವಿಕಲ್ಪ, ನಿಷ್ಪ್ರಪಂಚ, ನಿರ್ಲೇಪವಾದ ಶೂನ್ಯತೆಯೆಂದು ವ್ಯವಹರಿಸುತ್ತಾರೆ. ಇದಕ್ಕೆ ಹುಟ್ಟುಸಾವುಗಳಿಲ್ಲ. ಇದನ್ನು ಬುದ್ಧಿಯಿಂದ ತಿಳಿಯುವುದಾಗಲೀ ಮಾತಿನಿಂದ ನಿರ್ವಚನಮಾಡುವುದಾಗಲೀ ಸಾಧ್ಯವಿಲ್ಲ. ಇದು ಶಾಶ್ವತವೆಂದರೂ ಅರ್ಥವಿಲ್ಲ. ಇದಕ್ಕೆ ಒಂದೇ ಅರ್ಥವಾಗಲೀ ಹಲವು ಅರ್ಥಗಳಾಗಲಿ ಇಲ್ಲ. ಇದು ಬರುವುದೂ ಇಲ್ಲ, ಹೋಗುವುದೂ ಇಲ್ಲ (ಅನಿರೋಧಂ ಅನುತ್ಪಾದಂ ಅನುಚ್ಚೇದಂಮಶಾಶ್ವತಂ ಅನೇಕಾರ್ಥಂ ನಾನಾರ್ಥಂ ಅನಾಗಮಮನಿರ್ಗಮಂ). ಈ ಎಂಟು ನೇತಿಗಳಿಂದ ಯಾವ ದೃಷ್ಟಿಯನ್ನಾದರೂ ನಿರಸನ ಮಾಡಬಹುದೆಂದು ಮಾಧ್ಯಮಿಕರ ವಿಶ್ವಾಸ. ಹೀಗೆ ಪರಮಾರ್ಥಸತ್ಯವನ್ನು ಬೌದ್ದಿಕವಾಗಿ ತಿಳಿಯಬೇಕಾದರೆ ಈ ನೀತಿಮಾರ್ಗ ಅವಶ್ಯಕ. ಆದರೆ ಅದನ್ನು ಸಾಕ್ಷಾತ್ಕರಿಸಿಕೊಳ್ಳಲು ಯೋಗಮಾರ್ಗವಲ್ಲದೆ ಬೇರೆ ದಾರಿಯಿಲ್ಲ.

	ಪರಮಾರ್ಥವೊಂದೇ ಸತ್ಯ. ಈ ಅದ್ವಯವಾದ ಮಾಧ್ಯಮಿಕರಿಗೂ ಯೋಗಾಚಾರಪಂಥದವರಿಗೂ ಸಾಧಾರಣವಾದುದು. ಮಾಧ್ಯಮಿಕರು. ಶೂನ್ಯತೆಯೆಂದರೆ ಯೋಗಾಚಾರರು ಅದನ್ನೇ ವಿಜ್ಞಪ್ತಿ ಎಂದಿದ್ದಾರೆ. ಪರಿಕಲ್ಪಿತ ಪರಮಾರ್ಥವೆಂಬ ದ್ವೈತ ದೃಷ್ಟಿ ಕೇವಲ ಔಪಚಾರಿಕವಾದದ್ದೆಂದೂ ಈ ಸಾಪೇಕ್ಷತೆ ಪರಮಾರ್ಥ-ಪರಮಾರ್ಥದಲ್ಲಿ ಇಲ್ಲವೆಂದೂ ಇವರ ವಾದ ಬೌದ್ಧರ ಮಿಥ್ಯಾಸಂವೃತ್ತಿ, ತಥ್ಯಸಂವೃತ್ತಿ ಪರಮಾರ್ಥಗಳನ್ನು ವೇದಾಂತಿಗಳು ಪ್ರಾತಿಭಾಸಿಕ, ವ್ಯಾವಹಾರಿಕ, ಪಾರಮಾರ್ಥಿಕ ಸತ್ಯಗಳೆಂದು ಕರೆದಿದ್ದಾರೆ. ವೇದಾಂತಿಗಳು ಪರಮಾರ್ಥಕ್ಕೆ ಹೇಳಿದ ಅನಿರ್ವಚನೀಯತ್ವಲಕ್ಷಣವನ್ನು ಮಹಾಯಾನದವರು ಮೌನವ್ಯಾಖ್ಯೆಯೆಂದು ನಿರೂಪಿಸಿದ್ದಾರೆ. ವಿಮಲ ಕೀರ್ತಿಯನ್ನು ಮಂಜುಶ್ರೀ ಬೋಧಿಸತ್ತ್ವ ಅದ್ವಯವಾದವನ್ನು ಪ್ರವಚನಮಾಡೆಂದು ಕೇಳಿಕೊಳ್ಳಲು ವಿಮಲಕೀರ್ತಿ ಸುಮ್ಮನಾದನಂತೆ. ಅವನು ಮೌನವನ್ನು ಧರಿಸಲು ಮಂಜುಶ್ರೀ ಸಾಧು, ಸಾಧು ; ಅದ್ವಯಧರ್ಮ ಮಾತಿಗೆ ಮೀರಿದ್ದು-ಎಂದು ಪ್ರಶಂಸಿಸಿದನಂತೆ. ನಿರ್ವಾಣವನ್ನು ಬಯಸಿ ಸಂಸಾರವನ್ನು ತಿರಸ್ಕರಿಸುವುದು ದ್ವೈತ, ಸಾಂವೃತಿಕ ಸತ್ಯ. ಪರಮಾರ್ಥದಲ್ಲಿ ನಿರ್ವಾಣವೂ ಇಲ್ಲ, ಸಂಸಾರವೂ ಇಲ್ಲ ; ಬಯಸುವುದೆಂಬುದೂ ಇಲ್ಲ; ಬೇಡವೆಂಬುದೂ ಇಲ್ಲ. ಪರಮಾರ್ಥವನ್ನು ಹೀಗೆಂದು, ಹಾಗಲ್ಲವೆಂದು ಹೇಳಲೇ ಬಾರದು.
(ಎಸ್.ಕೆ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ